ನಿಮ್ಮ ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ತಿರಸ್ಕೃತಗೊಂಡರೆ ಏನು ಮಾಡಬೇಕು

1 min read
by Angel One

ಭಾರತದಲ್ಲಿ ಆನ್‌ಲೈನ್ ಡಿಮ್ಯಾಟ್ ಅಕೌಂಟ್‌ಗಳನ್ನು 1996 ರಲ್ಲಿ ಪರಿಚಯಿಸಲಾಯಿತು. ಇದಕ್ಕೂ ಮೊದಲು ಹೆಚ್ಚಿನ ಟ್ರೇಡಿಂಗ್, ಪೇಪರ್ಆಧಾರಿತವಾಗಿತ್ತು. ಹೂಡಿಕೆದಾರರು ಷೇರುಗಳನ್ನು ಖರೀದಿಸುತ್ತಿದ್ದರು ಮತ್ತು ಅವುಗಳನ್ನು ಭೌತಿಕ ರೂಪದಲ್ಲಿ ಇಟ್ಟುಕೊಳ್ಳುತ್ತಿದ್ದರು. ಇದು ಭೌತಿಕ ಸರ್ಟಿಫಿಕೇಟ್‌ನ ಹಾನಿ, ನಷ್ಟ, ಹೆಸರು ಅಥವಾ ಸಹಿಯಲ್ಲಿ ವ್ಯತ್ಯಾಸ ಮತ್ತು ಪೇಪರ್-ವರ್ಕ್‌ಗೆ ಸಂಬಂಧಿಸಿದ ಕೆಲಸಗಳಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಯಿತು. ಡಿಮ್ಯಾಟ್ ಅಕೌಂಟ್‌ನ ಪರಿಚಯವು ಇಂತಹ ಹಲವಾರು ಸಮಸ್ಯೆಗಳನ್ನು ನಿರ್ಮೂಲನೆ ಮಾಡಿದೆ. ಆದಾಗ್ಯೂ ಅನೇಕ ಹೂಡಿಕೆದಾರರು ತಮ್ಮ ಷೇರುಗಳನ್ನು ಭೌತಿಕ ರೂಪದಲ್ಲಿ ಇಟ್ಟುಕೊಳ್ಳುತ್ತಾರೆ. ಡಿಮ್ಯಾಟ್ ಅಕೌಂಟ್ ಬರುವ ಮೊದಲು ತಮ್ಮ ಷೇರುಗಳನ್ನು ಖರೀದಿಸಿದ ಹೂಡಿಕೆದಾರರು ಅವುಗಳನ್ನು ಡಿಮೆಟೀರಿಯಲೈಸ್ ಮಾಡುವುದನ್ನು ಮರೆತ ಅಥವಾ ಷೇರು ಮಾರುಕಟ್ಟೆಯಲ್ಲಿ ಸಕ್ರಿಯವಾಗಿ ಭಾಗವಹಿಸದ ಹೂಡಿಕೆದಾರರ ವಿಷಯದಲ್ಲಿ ಇದು ನಿಜವಾಗಿದೆ. ಅಂತಹ ಹೂಡಿಕೆದಾರರು ಇಂದು ತಮ್ಮ ಹೋಲ್ಡಿಂಗ್‌ಗಳನ್ನು ಮಾರಾಟ ಮಾಡಲು ಬಯಸಿದರೆ, ಅವರು ತಮ್ಮ ಷೇರುಗಳನ್ನು ಮೊದಲು ಡಿಮ್ಯಾಟ್ ಅಥವಾ ಡಿಮೆಟೀರಿಯಲೈಸ್ ರೂಪದಲ್ಲಿ ಪರಿವರ್ತಿಸಬೇಕು. ನಿಮ್ಮ ಠೇವಣಿ ಭಾಗಿದಾರರು ಅಥವಾ ಡಿಪಿಗೆ ನಿಮ್ಮ ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಅಥವಾ ಡಿಆರ್‌ಎಫ್ ಅನ್ನು ಸಲ್ಲಿಸುವ ಮೂಲಕ ಇದನ್ನು ಮಾಡಲಾಗುತ್ತದೆ. ಆದಾಗ್ಯೂ ಕೆಲವೊಮ್ಮೆ ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಅನ್ನು ತಿರಸ್ಕರಿಸಲಾಗುತ್ತದೆ, ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಯಲು ನೀವು ಮುಂದೆ ಓದಿ.

 

ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಎಂದರೇನು ಮತ್ತು ಅದರ ಸಲ್ಲಿಕೆಯ ಪ್ರಕ್ರಿಯೆ ಏನು?

 

ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಅಥವಾ DRF ಎನ್ನುವುದು ಸೆಕ್ಯುರಿಟಿ ಹೊಂದಿರುವವರು ತಮ್ಮ ಹೋಲ್ಡಿಂಗ್‌ಗಳನ್ನು ಡಿಮೆಟೀರಿಯಲೈಸ್ ರೂಪದಲ್ಲಿ ಪರಿವರ್ತಿಸಲು ಬಯಸಿದಾಗ ಭರ್ತಿ ಮಾಡುವ ಫಾರ್ಮ್ ಆಗಿದೆ. ನಿಮ್ಮ ಈಕ್ವಿಟಿಯನ್ನು ಮಾರಾಟ ಮಾಡಲು ನೀವು ಬಯಸಿದರೆ ಡಿಮೆಟೀರಿಯಲೈಸೇಷನ್ ಅಗತ್ಯವಾಗಿದೆ. ಒಮ್ಮೆ ನೀವು DRF ಅನ್ನು ಭರ್ತಿ ಮಾಡಿದರೆ, ಅದನ್ನು ನಿಮ್ಮ DP ಗೆ ಹೋಲ್ಡಿಂಗ್‌ಗಳ ಮಾಲೀಕತ್ವದ ಭೌತಿಕ ಸರ್ಟಿಫಿಕೇಟ್‌ಗಳೊಂದಿಗೆ ಸಲ್ಲಿಸಬೇಕು. ನೀವು ಭರ್ತಿ ಮಾಡಿದ ಎಲ್ಲಾ ವಿವರಗಳನ್ನು ಡಿಪಿ ಪರಿಶೀಲಿಸುತ್ತದೆ ಮತ್ತು ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಅನ್ನು ಸಂಬಂಧಪಟ್ಟ ಕಂಪನಿ ಅಥವಾ ಅದರ ರಿಜಿಸ್ಟ್ರಾರ್ ಮತ್ತು ಟ್ರಾನ್ಸ್‌ಫರ್ (ಆರ್‌ ಆಂಡ್ ಟಿ) ಏಜೆಂಟ್‌ಗೆ ರವಾನಿಸುತ್ತದೆ. ರಿಜಿಸ್ಟ್ರಾರ್ ಮತ್ತು ಟ್ರಾನ್ಸ್‌ಫರ್ ಏಜೆಂಟ್ ಎನ್ನುವವರು ಕಂಪನಿಯ ಎಲ್ಲಾ ಷೇರುದಾರರ ಮತ್ತು ಷೇರು ವರ್ಗಾವಣೆಯ ಬಗ್ಗೆ ನಿಗಾ ಇಡಲು ಕಂಪನಿಯಿಂದ ನಿರ್ದಿಷ್ಟವಾಗಿ ನೇಮಕಗೊಂಡ ಅಧಿಕಾರಿಯಾಗಿರುತ್ತಾರೆ. ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಅನ್ನು ವಿತರಕ ಕಂಪನಿಯ ಆರ್‌ ಆಂಡ್ ಟಿ ಏಜೆಂಟ್ ಸ್ವೀಕರಿಸಿದ ನಂತರ, ಅವರು ಮತ್ತೊಮ್ಮೆ ಫಾರ್ಮ್ ಅನ್ನು ಪರಿಶೀಲಿಸುತ್ತಾರೆ ಮತ್ತು CDSL ಅಥವಾ NSDL ಆಗಿರಲಿ ಅದನ್ನು ಸಂಬಂಧಪಟ್ಟ ಠೇವಣಿದಾರರಿಗೆ ವರ್ಗಾಯಿಸುತ್ತಾರೆ. ಆದ್ದರಿಂದ ಈ ಸಂಪೂರ್ಣ ಸರಪಳಿಯಲ್ಲಿ, ನಿಮ್ಮ DRF ಅನ್ನು ಎರಡು ಹಂತಗಳಲ್ಲಿ ( ಮೊದಲು DP ಎರಡನೆಯದಾಗಿ ರಿಜಿಸ್ಟ್ರಾರ್) ಪರಿಶೀಲಿಸಲಾಗಿದೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಆದ್ದರಿಂದ ಈ ಎರಡು ಹಂತಗಳಲ್ಲಿ ಇದು ತಿರಸ್ಕೃತಗೊಳ್ಳುವ ಸಾಧ್ಯತೆಯಿರುತ್ತದೆ. ಪ್ರತಿ ಹಂತದಲ್ಲಿ ತಿರಸ್ಕೃತಗೊಳ್ಳಲು ಕಾರಣಗಳೇನು ಹಾಗೂ ಪ್ರತಿ ಪ್ರಕರಣದಲ್ಲೂ ನೀವು ಕೈಗೊಳ್ಳಬಹುದಾದ ಪರಿಹಾರ ಕ್ರಮಗಳೇನು ಎಂಬುದರ ಬಗ್ಗೆ ಇಲ್ಲಿ ಕೆಳಗೆ ನಾವೀಗ ನೋಡೋಣ.

 

DP ಯಿಂದ ಡಿಮೆಟೀರಿಯಲೈಸೇಶನ್ ರಿಕ್ವೆಸ್ಟ್ ಫಾರ್ಮ್ ತಿರಸ್ಕೃತಗೊಂಡಾಗ

 

DP ನಿಮ್ಮ DP ಗೆ ಮೊದಲ ಹಂತದ ಪರಿಶೀಲನೆಯಾಗಿದೆ. ಇದು ನಿಮ್ಮ ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಅನ್ನು ಈ ಕೆಳಗಿನ ಕಾರಣಗಳಿಗಾಗಿ ತಿರಸ್ಕರಿಸಬಹುದು:

 

ಪ್ರತಿ ಸರ್ಟಿಫಿಕೇಟ್‌ಗೆ ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ನಂಬರ್ ಅನನ್ಯವಾಗಿಲ್ಲ

 

ನೀವು ಹೊಂದಿರುವ ಪ್ರತಿ ಭೌತಿಕ ಸರ್ಟಿಫಿಕೇಟ್‌ಗೆ, ನೀವು ಹೊಸ ಸರ್ಟಿಫಿಕೇಟ್ ಭರ್ತಿ ಮಾಡಬೇಕಾಗುತ್ತದೆ ಮತ್ತ ಹೊಸ ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ನಂಬರ್ ಜನರೇಟ್ ಮಾಡಬೇಕಾಗುತ್ತದೆ. ಈ ಕಾರಣಕ್ಕಾಗಿ ನಿಮ್ಮ DP ನಿಮ್ಮ ಫಾರ್ಮ್ ಅನ್ನು ತಿರಸ್ಕರಿಸಿದರೆ, ನಿಮ್ಮ ಪ್ರತಿಯೊಂದು ಹೋಲ್ಡಿಂಗ್‌ಗಳಿಗೆ ಹೊಸ ಫಾರ್ಮ್ ಅನ್ನು ನೀವು ಭರ್ತಿ ಮಾಡಿದರಾಯಿತು.

 

ಸರ್ಟಿಫಿಕೇಟ್ ಮತ್ತು ಡಿಮ್ಯಾಟ್ ಅಕೌಂಟ್‌ನಲ್ಲಿ ಹೆಸರು ತಾಳೆಯಾಗದಿರುವಿಕೆ

ನಿಮ್ಮ ಹೋಲ್ಡಿಂಗ್ ಸರ್ಟಿಫಿಕೇಟ್‌ನಲ್ಲಿನ ಹೆಸರು DP ಯೊಂದಿಗಿನ ನಿಮ್ಮ ಡಿಮ್ಯಾಟ್ ಅಕೌಂಟ್‌ನಲ್ಲಿರುವ ಹೆಸರು ಎರಡೂ ಒಂದೇ ಆಗಿರಬೇಕು. ಇಂತಹ ಸಂದರ್ಭದಲ್ಲಿ ನೀವು ಎರಡು ಆಯ್ಕೆಗಳನ್ನು ಹೊಂದಿರುತ್ತೀರಿ. ಒಂದೋ, ನಿಮ್ಮ ಹೆಸರಿನ ಸಮಸ್ಯೆಯನ್ನು ಪರಿಹರಿಸುವ ಕುರಿತು ಕಾನೂನುಬದ್ಧ ಅಫಿಡವಿಟ್ ಸಲ್ಲಿಸಬಹುದು ಅಥವಾ ನಿಮ್ಮ ಹೋಲ್ಡಿಂಗ್ ಸರ್ಟಿಫಿಕೇಟ್‌ನಲ್ಲಿರುವ ಹೆಸರಿಗೆ ತಾಳೆಯಾಗುವಂತೆ ನೀವು ಹೊಸ ಡಿಮ್ಯಾಟ್ ಅಕೌಂಟ್ ತೆರೆಯಬಹುದು.

 

ಶೇರುಗಳ ಸಂಖ್ಯೆ ತಾಳೆಯಾಗದಿರುವಿಕೆ

 

ನಿಮ್ಮ ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ ನಮೂದಿಸಿದ ಶೇರುಗಳ ಸಂಖ್ಯೆಯು ನಿಮ್ಮ ಹೋಲ್ಡಿಂಗ್ ಸರ್ಟಿಫಿಕೇಟ್‌ನಲ್ಲಿ ನಮೂದಿಸಿರುವ ಸಂಖ್ಯೆ ಎರಡೂ ಒಂದೇ ಆಗಿರಬೇಕು. ಇದು ತಾಳೆಯಾಗದಿದ್ದರೆ, ನಿಮ್ಮ ಫಾರ್ಮ್ ಅನ್ನು DP ತಿರಸ್ಕರಿಸಬಹುದು. ಇದನ್ನು ಸರಿಪಡಿಸಲು, ನೀವು ಸರಿಯಾದ ವಿವರಗಳೊಂದಿಗೆ ಮತ್ತೊಮ್ಮೆ ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಅನ್ನು ಭರ್ತಿ ಮಾಡಿದರಾಯಿತು.

 

ನಿಮ್ಮ DP ನಿಮ್ಮ ಫಾರ್ಮ್ ಅನ್ನು ಪರಿಶೀಲಿಸಿದ ಬಳಿಕ, ಅದು ಡಿಮ್ಯಾಟ್ ರಿಕ್ವೆಸ್ಟ್ ನಂಬರ್ ಅಥವಾ DRN ಅನ್ನು ನೀಡುತ್ತದೆ. ಈ ವಿಷಯಕ್ಕೆ ಸಂಬಂಧಿಸಿದ ಮುಂದಿನ ಎಲ್ಲಾ ಸಂವಹನಗಳಲ್ಲಿ ಈ DRN ಬೇಕಾಗುತ್ತದೆ, ಹಾಗಾಗಿ ಇದನ್ನು ಜಾಗ್ರತೆಯಿಂದ ಉಳಿಸಿಕೊಳ್ಳಿ.

 

ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಅನ್ನು ರಿಜಿಸ್ಟ್ರಾರ್ ತಿರಸ್ಕರಿಸಿದಾಗ

ನಮ್ಮ DP ನಿಮ್ಮ DRF ಅನ್ನು ಪರಿಶೀಲಿಸಿದ ಬಳಿಕ, ಅದು ಫಾರ್ಮ್ ಅನ್ನು ನೀವು ಹೊಂದಿರುವ ಸ್ಟಾಕ್‌ನ ಕಂಪನಿಯ ರಿಜಿಸ್ಟ್ರಾರ್‌ಗೆ ಮತ್ತು ಟ್ರಾನ್ಸ್‌ಫರ್ ಏಜೆಂಟ್‌ಗೆ ಕಳುಹಿಸುತ್ತದೆ. ರಿಜಿಸ್ಟ್ರಾರ್ ಬಳಿಕ ವಿವರಗಳನ್ನು ಪರಿಶೀಲಿಸುತ್ತಾರೆ. ಈ ಕೆಳಗಿನ ಕಾರಣಕ್ಕಾಗಿ ರಿಜಿಸ್ಟ್ರಾರ್ ನಿಮ್ಮ ಫಾರ್ಮ್ ಅನ್ನು ತಿರಸ್ಕರಿಸಬಹುದು:

 

ಶೇರುಗಳ ಸಂಖ್ಯೆ ತಾಳೆಯಾಗದಿರುವಿಕೆ

ರಿಜಿಸ್ಟ್ರಾರ್‌ ಅವರ ದಾಖಲೆಗಳಲ್ಲಿ ನಮೂದಿಸಿರುವ ಸಂಖ್ಯೆಗಿಂತ ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ ನಮೂದಿಸಲಾಗಿರುವ ಶೇರುಗಳ ಸಂಖ್ಯೆ ಹೆಚ್ಚಿದ್ದರೆ, ನಿಮ್ಮ DRF ತಿರಸ್ಕೃತಗೊಳ್ಳಬಹುದು. ಅಂತಹ ಸಂದರ್ಭದಲ್ಲಿ, ನೀವು ಮತ್ತೊಮ್ಮೆ DRF ಅನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಅದನ್ನು ರಿಜಿಸ್ಟ್ರಾರ್‌ಗೆ ಕಳುಹಿಸಬೇಕಾಗುತ್ತದೆ.

 

ಡುಪ್ಲಿಕೇಟ್ ಅಥವಾ ನಕಲಿ ಸರ್ಟಿಫಿಕೇಟ್‌ಗಳು

ಭೌತಿಕ ಸರ್ಟಿಫಿಕೇಟ್‌ಗಳನ್ನು ಖೋಟಾ ಸೃಷ್ಟಿಸಲು ಅಥವಾ ಬದಲಾಯಿಸಲು ಸುಲಭವಾಗಿರುವುದರಿಂದ ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ. ರಿಜಿಸ್ಟ್ರಾರ್ ಅವರು ನಿಮ್ಮ ಫಾರ್ಮ್ ಅನ್ನು ಡುಪ್ಲಿಕೇಟ್ ಅಥವಾ ನಕಲಿ ಶೇರುಗಳು ಎಂಬ ಕಾರಣಕ್ಕೆ ತಿರಸ್ಕರಿಸಿದರೆ, ನಿಮ್ಮ ಶೇರುಗಳನ್ನು ಮಾರಾಟ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಬೇಕಾಗುತ್ತದೆ ಮತ್ತು ಅವರೊಂದಿಗೆ ಶೇರುಗಳ ಅಧಿಕೃತತೆಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ.

 

ಸಹಿ ತಾಳೆಯಾಗದಿರುವಿಕೆ

ಇದು ಭೌತಿಕ ಸರ್ಟಿಫಿಕೇಟ್‌ಗಳಲ್ಲಿ ಕಂಡುಬರುವ ಮತ್ತೊಂದು ಸಾಮಾನ್ಯ ಸಮಸ್ಯೆ. ಡಿಮೆಟೀರಿಯಲೈಸೇಶನ್ ರಿಕ್ವೆಸ್ಟ್ ಫಾರ್ಮ್‌ನಲ್ಲಿನ ಸಹಿಯು ರಿಜಿಸ್ಟ್ರಾರ್‌ ಅವರ ದಾಖಲೆಗಳಲ್ಲಿರುವ ಸಹಿಯೊಂದಿಗೆ ತಾಳೆಯಾಗದಿದ್ದರೆ, ನಿಮ್ಮ DRF ತಿರಸ್ಕೃತಗೊಳ್ಳಬಹುದು. ಬೇರೆ ಬೇರೆ ಕಾರಣಗಳಿಂದಾಗಿ ಸಹಿಗಳು ಬದಲಾಗಿರಬಹುದು. ಅತ್ಯಂತ ಸಾಮಾನ್ಯ ಕಾರಣ ವಯಸ್ಸು. ಜನರಿಗೆ ವಯಸ್ಸಾದಂತೆ, ಸಹಿಯು ಬದಲಾಗುವುದು ಸಾಮಾನ್ಯ. ಗಮನಾರ್ಹವಾಗಿ ಬದಲಾಗಿರುವ ರೀತಿಯಲ್ಲಿ ಸಹಿಗಳಲ್ಲಿ ವ್ಯತ್ಯಾಸವಿದ್ದರೆ, ಮ್ಯಾಜಿಸ್ಟ್ರೇಟ್ ಅವರ ಮುಂದೆ ನಿಮ್ಮ ಸಹಿಯನ್ನು ದೃಢೀಕರಿಸಬೇಕು ಮತ್ತು ನಿಮ್ಮ ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಅನ್ನು ದೃಢೀಕರಿಸಲು ಅದನ್ನು ರಿಜಿಸ್ಟ್ರಾರ್ ಅವರಿಗೆ ಕಳುಹಿಸಬೇಕು.

 

ISIN ತಾಳೆಯಾಗದಿರುವಿಕೆ

ISIN ಅಥವಾ ಇಂಟರ್‌ನ್ಯಾಶನಲ್ ಸೆಕ್ಯೂರಿಟೀಸ್ ಐಡೆಂಟಿಫಿಕೇಶನ್ ನಂಬರ್ ಎಂಬುದು 12- ಅಂಕಿಯ ಕೋಡ್ ಆಗಿದ್ದು, ಅದು ಪ್ರತಿ ಸೆಕ್ಯೂರಿಟಿಯನ್ನು ಅನನ್ಯವಾಗಿ ಗುರುತಿಸುತ್ತದೆ. ಕೆಲವೊಮ್ಮೆ ಕಂಪನಿಗಳು ಪೂರ್ಣವಾಗಿ ಪಾವತಿಸಿದ ಅಥವಾ ಭಾಗಶಃ ಪಾವತಿಸಿದ ಶೇರುಗಳಂತಹ ವಿವಿಧ ರೀತಿಯ ಸ್ಟಾಕ್‌ಗಳಿಗೆ ಬಹು ISIN ಗಳನ್ನು ನೀಡುತ್ತವೆ. ಅಂತಹ ಸಂದರ್ಭದಲ್ಲಿ ಸ್ಟಾಕ್ ಮಾಲೀಕರು ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ ತಪ್ಪಾದ ISIN ಅನ್ನು ನಮೂದಿಸುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ, ಸರಿಯಾದ ISIN ನೊಂದಿಗೆ ಮತ್ತೊಮ್ಮೆ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ.

 

ಕಂಪನಿಯದ ಸ್ಟಾಕ್‌ಗಳ ಮೇಲೆ ಸ್ಟಾಪ್ ಆರ್ಡರ್ ನೀಡಿಕೆ

 

ಕೆಲವೊಮ್ಮೆ SEBI ಅಥವಾ ಕೋರ್ಟ್‌ನ ಆದೇಶದ ಪ್ರಕಾರ, ಕಂಪನಿಯೊಂದರ ಸ್ಟಾಕ್‌ಗಳ ಮಾರಾಟದ ಮೇಲೆ ಸ್ಟಾಪ್ ಆರ್ಡರ್ ನೀಡಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅದು ಪರಿಹಾರಗವಾಗುವ ತನಕ ಕಂಪನಿಯ ಶೇರುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. 

 

ತೀರ್ಮಾನ

ನಿಮ್ಮ ಭೌತಿಕ ಶೇರುಗಳನ್ನು ಮಾರಾಟ ಮಾಡುವ ಮುನ್ನ ಡಿಮೆಟೀರಿಯಲೈಸ್ ಮಾಡುವುದು ಪೂರ್ವಅಗತ್ಯತೆಯಾಗಿದೆ. ಈ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು, ಡಿಮ್ಯಾಟ್ ರಿಕ್ವೆಸ್ಟ್ ಫಾರ್ಮ್ ಅನ್ನು ಭರ್ತಿ ಮಾಡುವಿಕೆಯನ್ನು ಹಾಗೂ ನಿಮ್ಮ DP ಗೆ ಅದನ್ನು ಸಲ್ಲಿಸುವ ಕಾರ್ಯವನ್ನು ಒಳಗೊಂಡಿದೆ. ಅಲ್ಲಿ ಪರಿಶೀಲನೆಗೊಂಡ ಬಳಿಕ ಅದನ್ನು ನೀಡಿದ ಕಂಪನಿಗೆ ಸಲ್ಲಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳೆಂದರೆ, ಫಾರ್ಮ್ ಭರ್ತಿ ಮಾಡುವಾಗ ಆಗುವ ದೋಷಗಳು ಅಥವಾ ಹೆಸರು ಅಥವಾ ಸಹಿ ತಾಳೆಯಾಗದಿರುವಿಕೆಯೇ ಆಗಿದೆ. ಇವುಗಳನ್ನು ಸರಿಪಡಿಸಿಕೊಂಡರೆ, ನೀವು ಮತ್ತೊಮ್ಮೆ ಫಾರ್ಮ್ ಸಲ್ಲಿಸಬಹುದು.